ಬಿದಿರು
ಉಷ್ಣ ಹಾಗೂ ಉಪೋಷ್ಣ ವಲಯಗಳಲ್ಲಿ ಸ್ವಾಭಾವಿಕವಾಗಿ ಮರದೋಪಾದಿಯಲ್ಲಿ ಬೆಳೆಯುವ ದಾರುಮಯ ಹುಲ್ಲುಸಸ್ಯ (ಬ್ಯಾಂಬೂ), ಬೊಂಬು, ಬಂಬು ಪರ್ಯಾಯನಾಮಗಳು. ಪೋಯೇಸೀ (ಏಕದಳದಾನ್ಯ ಸಸ್ಯ ಹಾಗೂ ಹುಲ್ಲುಗಳ) ಕುಟುಂಬದ ಬ್ಯಾಂಬೂಸಾಯ್‍ಡೀ ಉಪಕುಟುಂಬಕ್ಕೆ ಸೇರಿದೆ. ವಾಸ್ತವವಾಗಿ ಬಿದಿರಿನಲ್ಲಿ ಸುಮಾರು 500 ಪ್ರಭೇದಗಳಿವೆ. ಯೂರೊಪ್ ವಿನಾ ಮಿಕ್ಕೆಲ್ಲ ಖಂಡಗಳಲ್ಲಿ ಇವು ಬೆಳೆಯುತ್ತಿದ್ದು ಅಲ್ಲಿಯ ಅರಣ್ಯಗಳ ಮುಖ್ಯ ಅಂಶಗಳಾಗಿವೆ. ಭಾರತದಿಂದ ತೊಡಗಿ ಚೀನ ಜಪಾನ್‍ವರೆಗಿನ ಆಗ್ನೇಯ ಹಾಗೂ ಈಶಾನ್ಯ ಏಷ್ಯದ ದೇಶಗಳಲ್ಲಿ ಬಿದಿರಿನ ಸಂಖ್ಯಾಸಮೃದ್ಧಿಯನ್ನೂ ರೂಪ ವೈವಿಧ್ಯವನ್ನೂ ಗರಿಷ್ಟ ಮಟ್ಟದಲ್ಲಿ ಕಾಣಬಹುದು. ಆಫ್ರಿಕವೂ ಬಿದಿರಿನ ಸಂಪತ್ತಿಗೆ ಹೆಸರಾಗಿದೆ. ಮ್ಯಾಲಗ್ಯಾಸಿಯಲ್ಲಂತೂ ಅತ್ಯಧಿಕ ಸಂಖ್ಯೆಯ ಸ್ಥಾನಿಕಪ್ರಭೇದಗಳನ್ನು (ಎಂಡೆಮಿಕ್ ಸ್ಪೀಶೀಸ್) ಕಾಣಬಹುದು. ಇಲ್ಲಿಯ ಪ್ರಭೇದಗಳ ಸಂಖ್ಯೆ ಆಫ್ರಿಕದಲ್ಲಿ ಕಾಣಬರುವ ಎಲ್ಲ ಪ್ರಭೇದಗಳ ಸಂಖ್ಯೆಗಿಂತ ಬಹುಪಾಲು ಹೆಚ್ಚು. ಆಸ್ಟ್ರೇಲಿಯದಲ್ಲೂ ಬಿದಿರಿನ ಪ್ರಭೇದಗಳ ಸಂಖ್ಯೆ ಗಣನೀಯವಾಗಿದೆ. ಪಶ್ಚಿಮಗೋಳಾರ್ಧದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಭಾಗದಿಂದ ಹಿಡಿದು ಆರ್ಜಂಟೀನ, ಚಿಲಿಗಳ ದಕ್ಷಿಣ ಅಂಚಿನವರೆಗೂ ಬಿದಿರಿನ ವ್ಯಾಪ್ತಿಯುಂಟು. ಟಿಬೆಟ್ ಮತ್ತು ಚೀನಗಳ ಉತ್ತರ ಹಾಗೂ ವಾಯವ್ಯ ದಿಕ್ಕಿನ ಯೂರೇಷ್ಯ ಭಾಗದಲ್ಲಿ ಬಿದಿರು ಸ್ವಾಭಾವಿಕವಾಗಿ ಬೆಳೆದಿಲ್ಲವಾದರೂ ಬೇರೆಡೆಯಿಂದ ತಂದು ಬೆಳೆಸಿದ ಪ್ರಭೇದಗಳನ್ನು ಕಾಣಬಹುದು. ಭಾರತ, ಚೀನ, ಜಪಾನ್ ಹಾಗೂ ಇತರ ಆಗ್ನೇಯ ಏಷ್ಯ ದೇಶಗಳಲ್ಲಂತೂ ಬಿದಿರು ಅಲ್ಲಿಯ ಜನಜೀವನದಲ್ಲಿ ಅನೇಕ ವಿಧಗಳಲ್ಲಿ-ಮನೆಗಳ ನಿರ್ಮಾಣ ವಸ್ತುವಾಗಿ, ಆಹಾರವಾಗಿ, ಕಾಗದ ಮತ್ತಿತರ ಸಾಮಗ್ರಿಗಳ ತಯಾರಿಕೆಯ ಕಚ್ಚಾ ಪದಾರ್ಥವಾಗಿ, ಕರಕುಶಲಕಲೆಗೆ ಒದಗುವ ವಸ್ತುವಾಗಿ, ಕಲಾವಿದರ, ಕವಿಗಳ ರಚನೆಗಳಿಗೆ ಸ್ಫೂರ್ತಿಯ ಸಲೆಯಾಗಿ ಪ್ರಮುಖ ಪಾತ್ರವಹಿಸುತ್ತ ಬಂದಿದೆ. ಇಷ್ಟೆಲ್ಲ ಇದ್ದರೂ ಬಿದಿರಿನ ಸಸ್ಯ ವೈಜ್ಞಾನಿಕ ತಿಳಿವಳಿಕೆ ಅತ್ಯಲ್ಪವೆಂದೇ ಹೇಳಬೇಕು.

ಬಿದಿರು ಹುಲ್ಲಿನ ಕುಟುಂಬಕ್ಕೆ ಸೇರಿದ್ದು ತೃಣಸಸ್ಯಗಳ ಸಂಬಂಧಿಯಾಗಿದೆಯಾದರೂ ಇದಕ್ಕೂ ಹುಲ್ಲುಗಳಿಗೂ ಗುಣಲಕ್ಷಣಗಳಲ್ಲಿ ಅನೇಕ ವ್ಯತ್ಯಾಸವುಂಟು. ಇವುಗಳ ಪೈಕಿ ಅನೇಕವು ಬಲುಹಿಂದುಳಿದ ಲಕ್ಷಣಗಳೆನಿಸಿದೆ. ಬಿದಿರುಗಳ ಪ್ರಧಾನ ಲಕ್ಷಣಗಳೆಂದರೆ ಕಾಂಡ ದಾರುಮಯವಾಗಿರುವುದು, ಎಲೆಗಳಿಗೆ ತೊಟ್ಟುಗಳಿರುವುದು. ಎಲೆಯ ಕಾಂಡವನ್ನು ಸುತ್ತುವರಿದಿರುವ ಕವಚ ದಂಥ ಎಲೆಗಳು ಹಾಗೂ ರೆಂಬೆಗಳಲ್ಲಿ ಹುಟ್ಟುವ ಎಲೆಗಳು ಎಂದು ಎರಡು ರೀತಿಯ ಎಲೆಗಳಿರುವುದು, ಹೂಗಳ ಬುಡದಲ್ಲಿ ಚೆನ್ನಾಗಿ ರೂಪುಗೊಂಡಿರುವ ಮೂರು ಶಲ್ಕ (ಸ್ಕೇಲ್) ಇರುವುದು ಹಾಗೂ ಅಂಡಾಶಯ 1-3 ಶಲಾಕಾಗ್ರಗಳನ್ನು ಪಡೆದಿರುವ ಕಂಬದಂತಿರುವುದು.

ಬಿದಿರುಗಳನ್ನು ಬೀಜದ ಮೂಲಕ ವೃದ್ಧಿಸಬಹುದು. ಆದರೆ ಬಹುತೇಕ ಬಿದಿರು ಪ್ರಭೇದಗಳು ಹೂಬಿಡುವುದೇ ಬಲು ಅಪೂರ್ವವಾದ್ದರಿಂದ ಈ ವಿಧಾನ ಎಲ್ಲ ಬಿದಿರುಗಳಿಗೂ ಅನ್ವಯವಾಗುವುದಿಲ್ಲ. ಎಲ್ಲ ತೆರನ ಬಿದಿರುಗಳನ್ನೂ ಕಾಂಡತುಂಡುಗಳಿಂದ ವೃದ್ಧಿಸಬಹುದು. ಬಿದಿರು ಬಲುವೇಗವಾಗಿ ಬೆಳೆಯುವ ಸಸ್ಯಗಳ ಪೈಕಿ ಒಂದು. ಅಂತೆಯೇ ಇದನ್ನು ಪೋಷಿಸಿದಷ್ಟೂ ಚೆನ್ನಾಗಿ ಬೆಳೆಯುತ್ತದೆ. ಫಲವತ್ತಾದ, ಗೋಡು ನೆಲ ಇದರ ವೃದ್ದಿಗೆ ಉತ್ತಮ. ಕಾಂಡ ತುಂಡುಗಳನ್ನು ನೆಟ್ಟ ಮೇಲೆ ಒಂದೆರಡು ವರ್ಷಕಾಲ ತೇವ ಆರದಂತೆ ಮತ್ತು ಮಣ್ಣು ಹೊಡೆದು ಕೊಂಡು ಹೋಗದಂತೆ ಯುಕ್ತ ಪೋಷಕಾಂಶಗಳನ್ನೂ ಮಣ್ಣನ್ನು ಬಂಧಿಸುವ ಸಾಮಗ್ರಿಗಳನ್ನೂ ಊಡುತ್ತಿದ್ದರೆ ಬಿದಿರಿನ ಬೆಳೆ ಹುಲುಸಾಗುತ್ತದೆ. ಬೆಳೆವಣಿಗೆಯ ಕಾಲದಲ್ಲಿ ಯಥೇಚ್ಛವಾಗಿ ನೀರುಣಿಸಬೇಕು. ಎಳೆಯ ಗಿಡಗಳನ್ನು ಗಾಳಿಯಿಂದ ರಕ್ಷಿಸುವುದು ಕೂಡ ಅಗತ್ಯ.

ಬಿದಿರಿನಲ್ಲಿ ಹಲವಾರು ಜಾತಿ ಹಾಗೂ ಪ್ರಭೇದಗಳುಂಟು. ಪ್ರಧಾನವಾಗಿ ಇವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
1. ಮೆತುಕಾಂಡದ ಬಿದಿರುಗಳು: ಇವು ಪ್ರಧಾನವಾಗಿ ಕಾಡಿನ ಕೆಳಸ್ತರಗಳಲ್ಲಿ ಬೆಳೆಯುವಂಥವು, ಇವುಗಳ ಕಾಂಡ ಇನ್ನಿತರ ಹುಲ್ಲಿನ ಮೃದುಕಾಂಡದಂತಿರುವುದು. ಕಾಂಡದ ಕವಲೊಡೆಯುವಿಕೆ ಹಾಗೂ ಪ್ರಕಂದ ವ್ಯವಸ್ಥೆ ಸರಳವಾಗಿದೆ. ಇವುಗಳ ಪೈಕಿ ಅನೇಕ ಬಿದಿರುಗಳಲ್ಲಿ ಪರಾಗಾರ್ಪಣ ಕ್ರಿಯೆ ಕೀಟಗಳ ಸಹಾಯದಿಂದ ಜರಗುವುದು.

2. ದಾರುಮಯ ಕಾಂಡದ ಬಿದಿರುಗಳು: ಹೆಸರೇ ಸೂಚಿಸುವಂತೆ ಇವುಗಳ ಕಾಂಡ ದಾರುಮಯ, ಬಲುಗಟ್ಟಿ. ಕಾಂಡದ ಕವಲೊಡೆಯುವಿಕೆಯೂ ಪ್ರಕಂದ ವ್ಯವಸ್ಥೆಯೂ ಬಲು ಸಂಕೀರ್ಣತೆರನಾದ್ದು. ಇವು ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ ಬೆಳೆಯುವುವು. ಪರಾಗಾರ್ಪಣೆ ಗಾಳಿಯ ನೆರವಿನಿಂದ ನಡೆಯುತ್ತದೆ. ಆದರೆ ಇವು ಹೂಬಿಡುವುದೇ ಹಲವು ವರ್ಷಗಳಿಗೊಮ್ಮೆ (30-120 ವರ್ಷಗಳ ಅವಧಿಗೆ ಒಂದು ಸಲ). ಆದ್ದರಿಂದ ಪರಾಗಾರ್ಪಣೆ ಬಲು ವಿರಳ.

ಸಸ್ಯದ ಹಾಗೂ ಎಲೆಗಳ ಗಾತ್ರದಲ್ಲೂ ಬಿದಿರುಗಳಲ್ಲಿ ಅಗಾಧ ವ್ಯತ್ಯಾಸವುಂಟು. ಉದಾಹರಣೆಗೆ ಡೆಂಡ್ರೊಕೆಲಾಮಸ್ ಜೈಗಾಂಟಿಯಸ್ ಎಂಬ ಪ್ರಭೇದದ ಕಾಂಡದ ಎತ್ತರ 40 ಮೀ. ವ್ಯಾಸ 20 ಸೆಂಮಿ ಇದ್ದರೆ ಆತ್ರ್ರೊಸ್ಟೈಲಿಡಿಯವ್ ಸಾರ್ಮೆಂಟೋಸಮ್ ಎಂಬುದರ ಕಾಂಡ ಕೇವಲ ಪೆನ್ಸಿಲ್ಲಿನಷ್ಟು ಕಿರಿದಾಗಿದೆ. ಅಂತೆಯೇ ದಕ್ಷಿಣ ಅಮೆರಿಕದ ಅಂಡೀಸ್ ಪರ್ವತ ಪ್ರದೇಶದಲ್ಲಿ ಬೆಳೆಯುವ ನ್ಯೂರೊಲೆಪಿಸ್ ಈಲೇಟ ಎಂಬುದರ ಎಲೆಯ ಉದ್ದ 5 ಮೀ. ಅಗಲ 0.5 ಮೀ ಇದ್ದರೆ ಆತ್ರ್ರೊಸ್ಟೈಲಿಡಿಯಮ್ ಕ್ಯಾಪಿಲಿಪೋಲಿಯಮ್ ಪ್ರಭೇದದ ಎಲೆಯ ಅಗಲ 4 ಮಿಮೀಗಿಂತ ಹೆಚ್ಚಿಲ್ಲ. ಮೇಲೆ ಹೇಳಿದ ಗರಿಷ್ಟ, ಕನಿಷ್ಠ ಮಿತಿಗಳೊಳಗೆ ಉಳಿದೆಲ್ಲ ಬಿದಿರು ಬಗೆಗಳೂ ಇದ್ದು ಪೋಯೇಸೀ ಕುಟುಂಬದ ಅತ್ಯಂತ ವಿಭಿನ್ನ ತೆರನ ಸಸ್ಯಗಳೆನಿಸಿವೆ.
ಏಷ್ಯದಲ್ಲಿ ಸುಮಾರು 39 ಜಾತಿಗಳೂ ಆಫ್ರಿಕ ಮತ್ತು ಮ್ಯಾಲಗ್ಯಾಸೀಗಳಲ್ಲಿ 19 ಜಾತಿಗಳೂ ಅಮೆರಿಕಗಳಲ್ಲಿ 37 ಜಾತಿಗಳೂ ಕಾಣದೊರೆಯುತ್ತದೆ. ಭಾರತದಲ್ಲಿ ಅರುಂಡಿನೇರಿಯ ಬ್ಯಾಂಬೂಸ, ಡೆಂಡ್ರೊಕೆಲಾಮಸ್, ಆಕ್ಲಾಂಡ್ರ, ಆಕ್ಸಿಟನ್ಯಾಂತೆರ ಸೆಫಲೊಸ್ಟಾಕಿಯಮ್, ಜೈಗಾಂಟೊಕ್ಲೋವ, ಡ್ಯೆನೊಕ್ಲೋವ, ಮೆಲೊಕ್ಯಾನ ಮುಂತಾದ ಜಾತಿಗಳು ಬೆಳೆಯುತ್ತವೆ.
ಬಿದಿರುಗಳ ಅತ್ಯಂತ ವಿಚಿತ್ರ ಸಂಗತಿ ಹೂಬಿಡುವಿಕೆ. ಕೆಲವು ಬಗೆಗಳು ಪ್ರತಿ ವರ್ಷ ಹೂ ಬಿಡುವುವಾದರೆ ಬಹುತೇಕ ಪ್ರಭೇದಗಳಲ್ಲಿ 60-120 ವರ್ಷ ಅಂತರಕ್ಕೊಮ್ಮೆ ಹೂ ಅರಳುವುದು ವಾಡಿಕೆ. ಈ ತೆರನಾದ ಬಿದಿರುಗಳಲ್ಲಿ ಯಾವುದೋ ಒಂದು ಪ್ರದೇಶದಲ್ಲಿರುವ ಗಿಡಗಳು ಒಮ್ಮೇಲೆ ಸಾಮೂಹಿಕವಾಗಿ ಹೂಬಿಟ್ಟು ಕಾಯಿಕಚ್ಚಿ ತಮ್ಮ ಜೀವನವನ್ನೇ ಮುಗಿಸಿಬಿಡುವುವು. ಉದಾಹರಣೆಗೆ ಬಂಗಾಳದಲ್ಲಿ ಬೆಳೆಯುವ ಮೆಲೊಕ್ಯಾನ ಬ್ಯಾಂಬೂಸಾಯ್ಡಿಸ್ ಎಂಬ ಬೊಂಬು 30-35 ವರ್ಷ ಅವಧಿಯ ಅನಂತರ ಒಮ್ಮೆಲೇ ಹೂಬಿಡುತ್ತದೆ. ಈ ವೇಳೆ ರೂಪುಗೊಳ್ಳುವ ಬಿದಿರಿನಕಾಳೇ ಬಿದಿರಕ್ಕಿ ಎಂದು ಪ್ರಸಿದ್ಧ. ಇಂಥ ವಿದ್ಯಮಾನದಿಂದಾಗಿ ಜನಜೀವನದ ಆರ್ಥಿಕ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳಬಹುದು. ಹೂಬಿಟ್ಟು ತತ್‍ಕ್ಷಣ ಹಿಂಡಲಿನಲ್ಲಿಯ ಬಿದಿರೆಲ್ಲ ಸಾಯುವುದರಿಂದ ಬಡಜನಕ್ಕೆ ಗುಡಿಸಲು ನಿರ್ಮಾಣದ ಪ್ರಮುಖ ಸಾಮಗ್ರಿಯಾದ ಬಿದಿರು ಸಿಕ್ಕದೇ ಹೋಗುತ್ತದೆ. ಬಿದಿರಕ್ಕಿಯ ಮಹಾಪೂರದಿಂದಾಗಿ ಇಲಿ ಹೆಗ್ಗಣ ಮುಂತಾದ ದಂಶಕಗಳ ಸಂದಣಿ ವಿಪರೀತವಾಗುತ್ತದೆ. ತತ್ಫಲವಾಗಿ ಬಿದಿರಕ್ಕಿ ಮಾತ್ರವಲ್ಲದೆ ಬೇರೇನು ಕಾಳುಕಡ್ಡಿ ಇದ್ದರೂ ಮೂಷಿಕಗಳ ಬಾಯಿಗೆ ಬಲಿಯಾಗುತ್ತವೆ. ಜೊತೆಗೆ ಟೈಫಾಯಿಡ್, ಪ್ಲೇಗ್ ಮುಂತಾದ ಮಾರಿ ಬೇನೆಗಳು ತಾಂಡವವಾಡತೊಡಗುವುವು. ಇಂಥದೇ ವಿದ್ಯಮಾನ ದಕ್ಷಿಣ ಬ್ರೆಜಿóಲಿನಲ್ಲೂ ಆಗಾಗ ಸಂಭವಿಸುವುದುಂಟು.
ಹೂಬಿಡಲು ತೆಗೆದುಕೊಳ್ಳುವ ಅತ್ಯಂತ ದೀಘಾವಧಿ ಫಿಲೊಸ್ಟಾಕಿಸ್ ಬ್ಯಾಂಬೂಸಾಯ್ಡಿಸ್ ಬಿದಿರಿನಲ್ಲಿ. ಇದು ಸುಮಾರು 120 ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಹೀಗೆ ಬಿದಿರುಗಳಲ್ಲಿ ಹೂಬಿಡಲು ಇಷ್ಟು ದೀರ್ಘಕಾಲ ಏಕೆ ಬೇಕೆಂಬ ಪ್ರಶ್ನೆ ಸಸ್ಯ ವಿಜ್ಞಾನಿಗಳಿಗೆ ಇನ್ನೂ ಒಗಟಾಗಿಯೇ ಉಳಿದಿದೆ.

ಬಿದಿರಿನ ಉಪಯುಕ್ತತೆ : ಬಿದಿರು ಅತ್ಯುಪಯುಕ್ತ ತೃಣ ಸಸ್ಯ ಎಂದು ಹೆಸರಾಗಿದೆ. ಚೀನದಲ್ಲಿ ಬಿದಿರಿಗೆ ಸುಮಾರು 87 ತೆರನ ಉಪಯೋಗಗಳಿವೆ. ಕುರ್ಜ್ ಎಂಬ ವಿಜ್ಞಾನಿ ಭಾರತದಲ್ಲಿ ಬಿದಿರಿನ 124 ಉಪಯುಕ್ತ ಗುಣಗಳನ್ನು ಪಟ್ಟಿ ಮಾಡಿದ್ದಾನೆ (1876). ಕರ್ನಾಟಕದ ಮಲೆನಾಡನ್ನೂ ಒಳಗೊಂಡಂತೆ ಚೀನ, ಜಪಾನ್, ಟೈವಾನ್ ಮತ್ತಿತರ ದೇಶಗಳಲ್ಲಿ ಬಿದಿರಿನ ಎಳೆಯ ಕಾಂಡ (ಬಿದಿರು ಕಳಿಲೆ) ಬಲುಪ್ರಮುಖ ಆಹಾರ ವಸ್ತುವೆನಿಸಿದೆ. ಇದರಿಂದ ರುಚಿಕರ ಉಪ್ಪಿನ ಕಾಯಿ ತಯಾರಿಸಬಹುದು. ಟೈವಾನಿನಲ್ಲಿ ಒಂದು ಕಾರ್ಖಾನೆ ದಿನವೊಂದಕ್ಕೆ ಸುಮಾರು 150 ಟನ್ ಕಳಿಲೆಯನ್ನು ಸಂಸ್ಕರಿಸುತ್ತದೆ. ಒಂದು ಬಿದಿರು ಮೆಳೆಯಿಂದ ಲಭಿಸುವ ವಾರ್ಷಿಕ ಉತ್ಪನ್ನ ಕನಿಷ್ಠ 150 ಕೆಜಿ. ಬರಗಾಲ ಸಮಯದಲ್ಲಿ ಬಿದಿರಕ್ಕಿ ಬಡವರ ಆಧಾರವಾಗುತ್ತದೆ.

ಚೀನ ಮತ್ತು ಭಾರತಗಳಲ್ಲಿ ಬಿದಿರು, ಬಂಬು, ಕಾಗದ ತಯಾರಿಕೆಗೆ ಪ್ರಧಾನ ಕಚ್ಚಾ ಸಾಮಗ್ರಿಗಳೆನಿಸಿವೆ. ಭಾರತದ ಒಟ್ಟು ಕಾಗದದಲ್ಲಿ ಶೇಕಡಾ 70 ಬಿದಿರಿನಿಂದ ತಯಾರಾಗುತ್ತದೆ. ಬಾಂಗ್ಲಾದೇಶ, ಥಾಯ್ಲೆಂಡ್, ಇಂಡೋನೇಷ್ಯ, ಟೈವಾನ್, ಫಿಲಿಪೀನ್ಸ್ ಮತ್ತು ಬ್ರೆಜಿóಲ್‍ಗಳೂ ಬಿದಿರಿನ ಕಾಗದ ತಯಾರಿಕೆಗೆ ಪ್ರಸಿದ್ಧವಾಗಿವೆ.

ಬಿದಿರು ರೇಯಾನ್ ಎಳೆಯ ಉತ್ಪಾದನೆಗೂ ಒದಗುತ್ತದೆ. ತಿರುವಾಂಕೂರಿನಲ್ಲಿ ಬಿದಿರಿನಿಂದ ರೇಯಾನ್ ತಯಾರಿಸುವ ಕಾರ್ಖಾನೆ 1947ರಲ್ಲಿ ಆರಂಭವಾಯಿತು. ಪಾಕಿಸ್ತಾನದಲ್ಲೂ ದಿನಕ್ಕೆ 5000 ಟನ್ ರೇಯಾನ್ ತಯಾರಿಸುವ ಕಾರ್ಖಾನೆ 1972ರಲ್ಲಿ ಸ್ಥಾಪಿತವಾಯಿತು.

ತುಂಬ ವ್ಯಾಪಕವಾದ ಪ್ರಕಂದ ಹಾಗೂ ಬೇರು ವ್ಯವಸ್ಥೆ ಬಿದಿರಿನಲ್ಲಿ ಇರುವುದರಿಂದ ಇದು ಭೂಸವಕಳಿಯನ್ನು ತಡೆಯುವ ಉತ್ತಮ ಸಾಧನವೆನಿಸಿದೆ. ಇದರ ಎಲೆಗಳು ನೆಲಕ್ಕೆ ಉತ್ತಮ ಹಸುರುಗೊಬ್ಬರ ಒದಗಿಸುವುವಲ್ಲದೆ ಗಾಳಿ, ಬಿಸಿಲುಗಳನ್ನು ತಡೆಯುವ ಉತ್ತಮ ಉಪಾಯಗಳೂ ಎನಿಸಿವೆ. ಬಿದಿರು ತುಂಬ ಗಟ್ಟಿ ಮತ್ತು ದೃಢವಾದ ವಸ್ತುವಾಗಿರುವುದಲ್ಲದೆ, ಯುಕ್ತ ಆಕಾರ, ರಚನೆ, ಹಗುರತನ ಪಡೆದಿರುವುದರಿಂದ ಬಹಳ ಒಳ್ಳೆಯ ಕಟ್ಟಡ ಸಾಮಗ್ರಿ ಎಂದೂ ಎನಿಸಿಕೊಂಡಿದೆ. ಜೊತೆಗೆ ಇದು ಅಗ್ಗವಾದದ್ದು. ಸಮೃದ್ಧವಾಗಿ ಸಿಗುವುದರಿಂದ ನಿರ್ಮಾಣ ಕಾರ್ಯಗಳಲ್ಲಿ ಬಲು ಜನ ಪ್ರಿಯವಾಗಿದೆ. ಭಾರತದಲ್ಲಿ ಬಿದಿರು ಕಟ್ಟಡ ಸಾಮಗ್ರಿಯಾಗಿ ವೇದಗಳ ಕಾಲದಿಂದಲೂ ಬಳಕೆಯಲ್ಲಿತ್ತು. ಜಪಾನ್, ಚೀನ, ಭಾರತಗಳಲ್ಲಿ ಬಿದಿರಿನ ಹೆಣಿಗೆ ಬಲು ಪ್ರಸಿದ್ಧ. ಕಲೆ, ಬುಟ್ಟಿ, ಚಾಪೆ, ಹಂಚು ಹೊದಿಸುವ ಹಂದರ, ಗೋಡೆ ಹೊದಿಕೆ, ಆಟಿಕೆಗಳು, ನಿತ್ಯೋಪಯೋಗಿ ಉಪಕರಣಗಳು ಅಲಂಕರಣ ಸಾಮಗ್ರಿಗಳು-ಹೀಗೆ ಹಲವು ಹತ್ತು ವಿಧಗಳಲ್ಲಿ ಬಿದಿರಿನ ಬಳಕೆಯಾಗುತ್ತದೆ. ಜಪಾನಿನಲ್ಲಂತೂ ಬಿದಿರಿನ ಕೈಗಾರಿಕಾ ತಂತ್ರ ಅತ್ಯುನ್ನತ ಮಟ್ಟದಲ್ಲಿದ್ದು ಅಲ್ಲಿ ಇದು ಒಂದು ರೀತಿಯ ಕುಶಲ ಕಲೆಯಾಗಿ ಬೆಳೆದುಬಂದಿದೆ.

ಮಲೆನಾಡಿನ ಹಳ್ಳಿಗಳಲ್ಲಿ ಬೊಂಬನ್ನು ಉದ್ದುದ್ದ ಸೀಳಿ ನೀರು ಹಾಯಿಸುವ ಕೊಳಾಯಿಗಳಾಗಿ ಬಳಸುವ ಕ್ರಮ ಬಲು ಸಾಮಾನ್ಯ. ಅಮೆರಿಕ, ಜರ್ಮನಿ, ಜಪಾನ್, ಇಟಲಿ, ಚೀನ ಹಾಗೂ ಇಂಡೋನೇಷ್ಯಗಳಲ್ಲಿ ಸಿಮೆಂಟ್ ಕಾಂಕ್ರಿಟಿನೊಂದಿಗೆ ಬಿದಿರನ್ನು, ಕಬ್ಬಿಣಕ್ಕೆ ಬದಲಾಗಿ, ಭದ್ರ ಚೌಕಟ್ಟಾಗಿ ಬಳಸುವ ಪ್ರಯೋಗಗಳು ನಡೆದಿವೆ.

ಬಿದಿರಿನ ಮೇಲ್ಮೈಯಲ್ಲಿ ಶೇಖರಗೊಳ್ಳುವ ಮೇಣ ತುಂಬ ಉಪಯುಕ್ತ ವಸ್ತುವೆನಿಸಿದೆ. ಪೊಳ್ಳು ಬೊಂಬಿನೊಳಗೆ ಸಂಗ್ರಹವಾಗುವ ಹರಳಿನ ರೀತಿಯ ಬಿದಿರುಪ್ಪು (ಟ್ಯಾಬಷಿಯರ್) ಔಷಧಿಯಾಗಿಯೂ ರಾಸಾಯನಿಕ ಕ್ರಿಯೆಗಳಲ್ಲಿ ವೇಗ ವರ್ಧಕವಾಗಿಯೂ ಬಳಕೆಯಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ